ಮೂತ್ರಕೋಶ -
ಮೂತ್ರಪಿಂಡಗಳಿಂದ ನಿರಂತರವಾಗಿ ಉತ್ಪತ್ತಿ ಆಗುವ ಮೂತ್ರವನ್ನು ಕೂಡಿಟ್ಟುಕೊಂಡು ಯುಕ್ತ ವೇಳೆಯಲ್ಲಿ ವಿಸರ್ಜಿಸುವ ಆಶಯ (ಯೂರಿನರಿ ಬ್ಲ್ಯಾಡರ್).  ಇದೊಂದು ಸ್ನಾಯು ಲೋಳೆಪೊರೆಯುಕ್ತ ಕೋಶ.  ಹೀಗಿಲ್ಲವಾಗಿದ್ದರೆ ಮೂತ್ರ ಸದಾ ತೊಟ್ಟಿಕ್ಕುತ್ತಿರಬೇಕಾಗಿತ್ತು.  ಇದರಲ್ಲಿ ಸಂಗ್ರಹವಾಗುವ ಮೂತ್ರದ ಪ್ರಮಾಣಕ್ಕೆ ಅನುಸಾರವಾಗಿ ಇದರ ಗಾತ್ರ,  ಸ್ಥಾನ ಮತ್ತು ನೆರೆ ಅಂಗಗಳೊಡನೆ ಸಂಬಂಧ ವ್ಯತ್ಯಾಸಗೊಳ್ಳುತ್ತಿರುತ್ತವೆ.  ಇದರ ಹಿಂದಿರುವ ಗುದನಾಳ ತುಂಬಿದರೆ ಮೂತ್ರಕೋಶವನ್ನು ಮುಂದಕ್ಕೆ ಹಾಗೂ ಮೇಲಕ್ಕೆ ತಳ್ಳುತ್ತದೆ.

	ಖಾಲಿ ಮೂತ್ರಕೋಶ : ಹೆಣದ ಖಾಲಿ ಮೂತ್ರಕೋಶ ಇದ್ದಲ್ಲೇ ಫಾರ್ಮಲಿನ್ನಿನಿಂದ ಗಟ್ಟಿಯಾಗಿದ್ದರೆ ತುದಿಕೆಳಗಾದ ಚತುರ್ಮುಖಿಯಾಗಿ ಶ್ರೋಣಿಯಲ್ಲೇ ಇರುತ್ತದೆ.  ನಾಲ್ಕು ತ್ರಿಕೋಣಾಕಾರ ಮುಖಗಳು ಅಸಮ.  ಹಿಮ್ಮುಖದ ಕಡೆ ಗುದನಾಳ, ವೃಷಣ ನಾಳಗಳು ಮತ್ತು ವೀರ್ಯಕೋಶಗಳಿರುತ್ತವೆ.  ತುದಿ ಬಲ ಎಡ ಮೇಢ್ರಾಸ್ಥಿಗಳ ಮಧ್ಯ ಸಂಧಿಯ ಹಿಂದಿದೆ.  ತುದಿಗೆ ಮಧ್ಯ ನಾಭಿ ಹುರಿ ಅಂಟಿದೆ.  ಮೇಲ್ಮುಖದ ಹಿಂದಿನ ಕೋಣಗಳಲ್ಲಿ ಬಲ ಎಡ ಮೂತ್ರಪಿಂಡನಾಳಗಳು ತೆರೆಯುತ್ತವೆ.  ಮೇಲ್ಮುಖದ ಪಕ್ಕಗಳಲ್ಲಿ ಉದರ ಪರಿವೇಷ್ಟನ ಕೋಶದ ಚಾಚುಗಳು ಮೂತ್ರಕೋಶ ಪಾಶ್ರ್ವಗಳಲ್ಲಿವೆ.  ಬಲ ಎಡ ಮುಖಗಳಿಗೂ ಮೇಢ್ರಾಸ್ಥಿಗಳಿಗೂ (ಭಗಾ) ನಡುವೆ ರೆಟ್ಟಿಯಸನ ಸಡಿಲ ನಾರೂತಕದ ಕುಳಿ ಇದೆ.

	ತುಂಬಿದ ಮೂತ್ರಕೋಶ : ಇದರ ಮೇಲ್ಮುಖ ಉದರದೊಳಕ್ಕೇರಿ ಕೋಶ ಅಂಡಾಕಾರ ಪಡೆಯುತ್ತದೆ.  ಇದರಲ್ಲಿ ಸುಮಾರು 0.5 ಲೀ ಮೂತ್ರವಿರುತ್ತದೆ.  ಇದರ ದೀರ್ಘವ್ಯಾಸ 12 ಸೆಂಮೀ.  ಮೇಲಿನಮೈ ಹಿಂತಿರುಗಿ ಇದಕ್ಕೂ ಗುದನಾಳಕ್ಕೂ ನಡುವೆ ಇರುವ ಉದರ ಪರಿವೇಷ್ಟನ ಕಿಸೆಯಲ್ಲಿ ಕರುಳಿನ ಗೊಣಸುಗಳಿವೆ.  ಕೆಳಮೈ ಮೇಢ್ರಾಸ್ಥಿಗಳ ಮೇಲಿರುವ ಉದರದ ಮುಂಭಿತ್ತಿಯ ಮೇಲೆ ವಾಲಿರುತ್ತದೆ.

	ಹಿಮ್ಮೈ ಸ್ಥಾನವ್ಯತ್ಯಾಸವಿಲ್ಲದೆ ಇದ್ದಲ್ಲೇ ಇರುತ್ತದೆ.  ತುದಿ ಹೊಕ್ಕಳಿನ ಕಡೆ ಏರಿರುತ್ತದೆ; ಮೂತ್ರ ಕಟ್ಟಿದರೆ ಹೊಕ್ಕಳಿನವರೆಗೂ ಏರಬಹುದು.

	ಮೂತ್ರಕೋಶದ ಒಳಭಾಗ : ಲೋಳಪೊರೆ ಸ್ನಾಯು ಪದರಕ್ಕೆ ಸಡಿಲವಾಗಿ ಅಂಟಿರುವುದರಿಂದ ಕೋಶ ಖಾಲಿಯಾದಾಗ ಲೋಳೆಪೊರೆ ಸುಕ್ಕು ಬಿದ್ದು ಮಡಿಕೆಗಳಾಗುತ್ತದೆ.  ಕೋಶ ತುಂಬಿ ಬಿರಿಯುವಾಗ ಮಡಿಕೆಗಳಿರುವುದಿಲ್ಲ.  ಮೂತ್ರಪಿಂಡ ನಾಳಗಳು ಮೂತ್ರಕೋಶದೊಳಗೆ ತೆರೆಯುವಲ್ಲಿ ಮೂತ್ರಕೋಶನಾಳದ ಒಳದ್ವಾರದ ಮೇಲಿರುವ ಮೂತ್ರಕೋಶ ತ್ರಿಕೋಣದಲ್ಲಿ ಲೋಳೆಪೊರೆ ಪೇಶಿಪದರಕ್ಕೆ ಗಟ್ಟಿಯಾಗಿ ಅಂಟಿರುವುದರಿಂದ ಅದು ಸುಕ್ಕಾಗದೆ ನುಣ್ಣಗಿರುತ್ತದೆ.  ಮೂತ್ರಪಿಂಡನಾಳಗಳ ರಂಧ್ರಗಳ ನಡುವೆ, ಅಂದರೆ ಮೂತ್ರಕೋಶ ತ್ರಿಕೋಣದ ಹಿಂದಿರುವ ಅಡಿಯಲ್ಲಿ, ಪಿಂಡನಾಳಗಳ ದುಂಡೇಣು (ಟೋರಸ್) ಇದೆ.  ಕೋಶವೀಕ್ಷಕದ (ಸಿಸ್ಟೊಸ್ಕೋಪ್) ಮೂಲಕ ಬೆಳಕು ಬಿಟ್ಟಾಗ ಮೂತ್ರಪಿಂಡನಾಳಗಳೊಳಕ್ಕೆ ಮೂತ್ರಾಪಕರ್ಷಕ ಕೊಳವೆಯನ್ನು (ಯುರೀಟರಿಕ್ ಕೆತೀಟರ್) ತೂರಿಸಲು ಮಾರ್ಗದರ್ಶಿ ಅನ್ನುವಂತೆ ದುಂಡೇಣು ಕಾಣುತ್ತದೆ.  ಇದರ ಕೊನೆಗಳಲ್ಲಿ ಮೂತ್ರಪಿಂಡನಾಳಗಳ ರಂಧ್ರಗಳು ಉದ್ದ ಕಂಡಿಗಳಂತಿರುತ್ತವೆ.  ಸಂಕುಚಿತ ಶೂನ್ಯಕೋಶದಲ್ಲಿ ರಂಧ್ರಗಳು 2.5 ಸೆಂಮೀ ಅಂತರದಲ್ಲಿರುತ್ತವೆ.  ಮೂತ್ರಕೋಶನಾಳದ್ವಾರದಿಂದಲೂ ಇವು 2.5 ಸೆಂಮೀ ದೂರದಲ್ಲಿವೆ.  ತುಂಬಿ ಉಬ್ಬಿದ ಕೋಶದಲ್ಲಿ ಅಂತರಗಳೂ 5 ಸೆಂಮೀ ಇರುತ್ತವೆ.  ಮೂತ್ರಕೋಶದ ಅತಿ ಕೆಳಭಾಗದಲ್ಲಿ ಇದರ ನಾಳದ ದ್ವಾರ ಮುಂಬಾಗಿದ ಬಾಲಚಂದ್ರಾಕಾರದಲ್ಲಿದೆ.  ದ್ವಾರದ ಹಿಂದೆ ಪ್ರಾಸ್ಟೇಟ್ ಗ್ರಂಥಿಯ ಮಧ್ಯ ಹಾಲೆ ಇದ್ದು ಕೋಶದೊಳಕ್ಕೆ ಕೊಂಚ ಉಬ್ಬಿರುವುದರಿಂದ ಮೂತ್ರಕೋಶ ನಾಳೆ ರಂಧ್ರ ಬಾಲಚಂದ್ರಾಕಾರದಲ್ಲಿರುತ್ತದೆ.	
(ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ